ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳ ಭರ್ತಿಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಲಕ್ಷಾಂತರ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಬಹುದೊಡ್ಡ ಸಿಹಿಸುದ್ದಿ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2026-27ನೇ ಸಾಲಿನ ಬಜೆಟ್ನಲ್ಲಿ ಬರೋಬ್ಬರಿ 15,000 ಶಿಕ್ಷಕರ ನೇಮಕಾತಿಗೆ ಅಧಿಕೃತವಾಗಿ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸಲು ಮತ್ತು ಹಲವು ವರ್ಷಗಳಿಂದ ಕಾಡುತ್ತಿರುವ ಬೋಧಕರ ಕೊರತೆಯನ್ನು ಶಾಶ್ವತವಾಗಿ ನೀಗಿಸಲು ಸರ್ಕಾರ ಈ ಐತಿಹಾಸಿಕ ನಿರ್ಧಾರ ಕೈಗೊಂಡಿದೆ.
ನೇರ ನೇಮಕಾತಿ ಮೂಲಕ ಭರ್ತಿ: ಬಜೆಟ್ ಘೋಷಣೆಯ ಅನ್ವಯ, ಪ್ರಸಕ್ತ 2026-27ನೇ ಸಾಲಿನಲ್ಲಿಯೇ ಪ್ರಾಥಮಿಕ, ಪ್ರೌಢ ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಒಟ್ಟು 15,000 ಬೋಧಕ ಹುದ್ದೆಗಳನ್ನು ‘ನೇರ ನೇಮಕಾತಿ’ (Direct Recruitment) ಪ್ರಕ್ರಿಯೆಯ ಮೂಲಕ ಭರ್ತಿ ಮಾಡಲಾಗುವುದು. ಶೀಘ್ರದಲ್ಲೇ ಶಿಕ್ಷಣ ಇಲಾಖೆಯು ವಿಷಯವಾರು ಮತ್ತು ಜಿಲ್ಲಾವಾರು ಖಾಲಿ ಹುದ್ದೆಗಳ ರೋಸ್ಟರ್ ಪಟ್ಟಿಯನ್ನು ಸಿದ್ಧಪಡಿಸಿ ಅಧಿಕೃತ ಅಧಿಸೂಚನೆ (Notification) ಹೊರಡಿಸುವ ನಿರೀಕ್ಷೆಯಿದೆ.
ಬಿ.ಎಡ್, ಡಿ.ಎಡ್ ಅಭ್ಯರ್ಥಿಗಳಿಗೆ ದೊಡ್ಡ ರಿಲೀಫ್: ಶಿಕ್ಷಕರಾಗುವ ಕನಸು ಹೊತ್ತು ಬಿ.ಎಡ್ (B.Ed), ಡಿ.ಎಡ್ (D.Ed) ಪದವಿ ಮುಗಿಸಿ, ಟಿಇಟಿ (TET) ಪರೀಕ್ಷೆ ಕಟ್ಟಿ ನೇಮಕಾತಿಗಾಗಿ ಕಾಯುತ್ತಿದ್ದ ರಾಜ್ಯದ ನಿರುದ್ಯೋಗಿ ಯುವಜನತೆಗೆ ಈ ಬೃಹತ್ ನೇಮಕಾತಿ ಘೋಷಣೆ ದೊಡ್ಡ ರಿಲೀಫ್ ನೀಡಿದೆ.
ಒಂದೆಡೆ 3,900 ಕೋಟಿ ರೂ. ವೆಚ್ಚದಲ್ಲಿ 800 ‘ಕರ್ನಾಟಕ ಪಬ್ಲಿಕ್ ಶಾಲೆ’ಗಳನ್ನು (KPS) ಹೊಸದಾಗಿ ನಿರ್ಮಿಸುತ್ತಿರುವ ಸರ್ಕಾರ, ಆ ಶಾಲೆಗಳಿಗೂ ಅತ್ಯುತ್ತಮ ಶಿಕ್ಷಕರನ್ನು ಒದಗಿಸುವ ನಿಟ್ಟಿನಲ್ಲಿ ಈ 15,000 ಹುದ್ದೆಗಳ ನೇಮಕಾತಿಗೆ ಆದ್ಯತೆ ನೀಡಿದೆ. ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅತ್ಯಂತ ಪಾರದರ್ಶಕವಾಗಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.