LPG GAS Price: ಬಿಗ್ ಶಾಕ್: ಇರಾನ್-ಇಸ್ರೇಲ್ ಯುದ್ಧದ ಏಫೆಕ್ಟ್; ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ‌, ಇಂದಿನ ಹೊಸ ರೇಟ್ ಎಷ್ಟು ಗೊತ್ತಾ?

Telegram Group Join Now
WhatsApp Group Join Now

ಯುದ್ಧ ಎಲ್ಲೋ ನಡೆಯುತ್ತಿದೆ, ಆದರೆ ಅದರ ಬಿಸಿ ನೇರವಾಗಿ ನಮ್ಮ ಅಡುಗೆ ಮನೆಗೆ ತಟ್ಟಲಾರಂಭಿಸಿದೆ. ಹೌದು, ಮಧ್ಯಪ್ರಾಚ್ಯದಲ್ಲಿ ಶುರುವಾಗಿರುವ ಇರಾನ್-ಇಸ್ರೇಲ್ ಯುದ್ಧದ ಕಾರ್ಮೋಡ ಇದೀಗ ಭಾರತದ ಇಂಧನ ಮಾರುಕಟ್ಟೆಯನ್ನು ಆವರಿಸಿದೆ.

ಇದರ ನೇರ ಪರಿಣಾಮವಾಗಿ ದೇಶಾದ್ಯಂತ ಎಲ್​ಪಿಜಿ (LPG GAS Price) ಗ್ಯಾಸ್ ಸಿಲಿಂಡರ್ ದರವನ್ನು ದಿಢೀರ್ ಏರಿಕೆ ಮಾಡಲಾಗಿದ್ದು, ಗ್ರಾಹಕರಿಗೆ ದೊಡ್ಡ ಶಾಕ್ ಎದುರಾಗಿದೆ.

ಶುಕ್ರವಾರ ಮಧ್ಯರಾತ್ರಿಯಿಂದಲೇ ಈ ಹೊಸ ದರಗಳು ಜಾರಿಗೆ ಬಂದಿವೆ. ಗೃಹಬಳಕೆ ಹಾಗೂ ವಾಣಿಜ್ಯ ಬಳಕೆಯ ಎರಡೂ ಸಿಲಿಂಡರ್‌ಗಳ ಬೆಲೆಯಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ. ಹಾಗಾದರೆ ಯಾವ ಸಿಲಿಂಡರ್‌ಗೆ ಎಷ್ಟು ರೇಟ್ ಜಾಸ್ತಿಯಾಗಿದೆ? ಇಲ್ಲಿದೆ ಪಕ್ಕಾ ಮಾಹಿತಿ:

ಮನೆಬಳಕೆ ಸಿಲಿಂಡರ್ ಬೆಲೆ 60 ರೂ. ಏರಿಕೆ! ಪ್ರತಿದಿನ ಮನೆಯಲ್ಲಿ ಅಡುಗೆಗೆ ಬಳಸುವ 14.2 ಕೆಜಿ ತೂಕದ ರೆಗ್ಯುಲರ್ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಬರೋಬ್ಬರಿ 60 ರೂ. ಗಳಷ್ಟು ಹೆಚ್ಚಿಸಲಾಗಿದೆ. ಈ ಏರಿಕೆಯ ಬಳಿಕ ರಾಷ್ಟ್ರರಾಜಧಾನಿ ದೆಹಲಿಯಲ್ಲಿ 853 ರೂ. ಇದ್ದ ಸಿಲಿಂಡರ್ ದರ ಇದೀಗ 913 ರೂಪಾಯಿಗೆ ಮುಟ್ಟಿದೆ.

ಕಮರ್ಷಿಯಲ್ ಗ್ಯಾಸ್ 115 ರೂ. ದುಬಾರಿ! ಹೋಟೆಲ್, ಕ್ಯಾಟರಿಂಗ್ ಹಾಗೂ ಟೀ ಸ್ಟಾಲ್‌ಗಳಲ್ಲಿ ಬಳಸುವ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ಕೂಡ ಬಾಣದಂತೆ ಮೇಲೇರಿದೆ. ಒಂದೇ ಬಾರಿಗೆ 115 ರೂ. ಏರಿಸಲಾಗಿದೆ.

ಪರಿಣಾಮವಾಗಿ, ದೆಹಲಿಯಲ್ಲಿ ಇದರ ಬೆಲೆ 1,883 ರೂ. ಹಾಗೂ ಮುಂಬೈನಲ್ಲಿ 1,835 ರೂ.ಗಳಿಗೆ ತಲುಪಿದೆ. ವಿಶೇಷವೆಂದರೆ, ಮಾರ್ಚ್ 1ರಂದಷ್ಟೇ ಈ ಕಮರ್ಷಿಯಲ್ ಗ್ಯಾಸ್ ದರವನ್ನು 110 ರೂ. ನಷ್ಟು ಹೆಚ್ಚಿಸಲಾಗಿತ್ತು. ಇದೀಗ ಒಂದೇ ವಾರದಲ್ಲಿ ಮತ್ತೊಮ್ಮೆ ಬೆಲೆ ಏರಿಕೆಯ ಬರೆ ಬಿದ್ದಿದೆ.

ದಿಢೀರ್ ಬೆಲೆ ಏರಿಕೆಗೆ ಅಸಲಿ ಕಾರಣವೇನು? ಜಾಗತಿಕ ತೈಲ ಪೂರೈಕೆಯ ಪ್ರಮುಖ ಕೊಂಡಿಯಾಗಿರುವ ‘ಹಾರ್ಮುಜ್ ಜಲಸಂಧಿ’ (Strait of Hormuz) ಮೇಲೆ ಇರಾನ್ ನಿರ್ಬಂಧ ಹೇರಿದೆ. ಯುದ್ಧದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದೆ.

ಇದರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗುವ ಆತಂಕ ಶುರುವಾಗಿದೆ. ಇದರ ನೇರ ಹೊಡೆತವೇ ಇಂದಿನ ಬೆಲೆ ಏರಿಕೆ.

ಗ್ಯಾಸ್ ಕೊರತೆ ಆಗುತ್ತಾ? ಕೇಂದ್ರ ಸರ್ಕಾರ ಹೇಳಿದ್ದೇನು?: ಯುದ್ಧದ ವಾತಾವರಣ ಇರುವುದರಿಂದ ಮುಂದಿನ ದಿನಗಳಲ್ಲಿ ಗ್ಯಾಸ್ ಪೂರೈಕೆ ನಿಂತುಹೋಗುತ್ತಾ ಎಂಬ ಆತಂಕ ಸಾರ್ವಜನಿಕರಲ್ಲಿದೆ.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, “ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆ ಇರುವುದು ನಿಜ. ಆದರೆ, ನಮ್ಮ ಬಳಿ ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯ ಸಾಕಷ್ಟು ದಾಸ್ತಾನು (Stock) ಭದ್ರವಾಗಿದೆ. ಯಾವುದೇ ಕಾರಣಕ್ಕೂ ಭಾರತದಲ್ಲಿ ಇಂಧನ ಕೊರತೆ ಆಗುವುದಿಲ್ಲ” ಎಂದು ಭರವಸೆ ನೀಡಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ದೇಶದಲ್ಲಿ ಅನಿಲ ಪೂರೈಕೆ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಸಾರ್ವಜನಿಕ ಹಾಗೂ ಖಾಸಗಿ ವಲಯದ ಸಂಸ್ಕರಣಾಗಾರಗಳಿಗೆ (Refineries) ಗ್ಯಾಸ್ ಉತ್ಪಾದನೆಯನ್ನು ಹೆಚ್ಚಿಸುವಂತೆಯೂ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅಗತ್ಯಬಿದ್ದರೆ ಗಲ್ಫ್ ರಾಷ್ಟ್ರಗಳನ್ನು ಹೊರತುಪಡಿಸಿ, ಇತರೆ ದೇಶಗಳಿಂದಲೂ ಅನಿಲ ಆಮದು ಮಾಡಿಕೊಳ್ಳಲು ಸರ್ಕಾರಿ ತೈಲ ಕಂಪನಿಗಳು ಸಜ್ಜಾಗಿವೆ.

Telegram Group Join Now
WhatsApp Group Join Now

Leave a Comment