ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ಯೋಜನೆಯಡಿ 22 ನೇ ಕಂತಿನ ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ದೇಶದ ಕೋಟ್ಯಂತರ ಅನ್ನದಾತರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ರೈತರ ಬ್ಯಾಂಕ್ ಖಾತೆಗೆ ₹2,000 ಜಮಾ ಮಾಡುವ ಅಧಿಕೃತ ದಿನಾಂಕವನ್ನು ಇದೀಗ ಘೋಷಣೆ ಮಾಡಲಾಗಿದೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು (Ministry of Agriculture) ತನ್ನ ಅಧಿಕೃತ ‘X’ (ಟ್ವಿಟರ್) ಖಾತೆಯಲ್ಲಿ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಇದೇ ಬರುವ ಮಾರ್ಚ್ 13, 2026 ರಂದು ಪಿಎಂ ಕಿಸಾನ್ 22ನೇ ಕಂತಿನ ಹಣ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದೆ.
ಪಿಎಂ ಕಿಸಾನ್ ಅಧಿಕೃತ ಎಕ್ಸ್ (X) ಖಾತೆಯಲ್ಲಿಯೂ ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗಿದ್ದು, “ಅನ್ನದಾತರಿಗೆ ಗೌರವ, ಪಿಎಂ ಕಿಸಾನ್ 22ನೇ ಕಂತು ಮಾರ್ಚ್ 13 ರಂದು ಬಿಡುಗಡೆಯಾಗಲಿದೆ” ಎಂದು ಸ್ಪಷ್ಟಪಡಿಸಲಾಗಿದೆ.
ಮಾರ್ಚ್ 13 ರಂದು ಖಾತೆ ಸೇರಲಿದೆ ₹2,000: ಕೇಂದ್ರ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯಡಿ ಪ್ರತಿ 4 ತಿಂಗಳಿಗೊಮ್ಮೆ ರೈತರ ಖಾತೆಗೆ ನೇರವಾಗಿ ತಲಾ ₹2,000 ದಂತೆ, ವರ್ಷಕ್ಕೆ ಒಟ್ಟು ₹6,000 ಆರ್ಥಿಕ ನೆರವು ನೀಡಲಾಗುತ್ತದೆ. ಇದೀಗ 22 ನೇ ಕಂತಿನ ₹2,000 ಹಣ ಮಾರ್ಚ್ 13 ರಂದು ಡಿಬಿಟಿ (DBT) ಮೂಲಕ ನೇರವಾಗಿ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಆಗಲಿದೆ.
ಈ ನಿಯಮಗಳನ್ನು ಮರೆಯದಿರಿ: ದಿನಾಂಕವೇನೋ ಫಿಕ್ಸ್ ಆಗಿದೆ. ಆದರೆ, ಸರ್ಕಾರದ ಈ ಹಣ ನಿಮ್ಮ ಕೈಸೇರಬೇಕಾದರೆ ಪ್ರಮುಖ ಮೂರು ನಿಯಮಗಳನ್ನು ನೀವು ಪಾಲಿಸಿರಲೇಬೇಕು.
- ನಿಮ್ಮ ಪಿಎಂ ಕಿಸಾನ್ ಖಾತೆಗೆ ಇ-ಕೆವೈಸಿ (eKYC) ಕಡ್ಡಾಯವಾಗಿ ಆಗಿರಬೇಕು.
- ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ (Aadhaar Seeding) ಆಗಿರಬೇಕು.
- ನಿಮ್ಮ ಜಮೀನಿನ ದಾಖಲೆಗಳ ಪರಿಶೀಲನೆ (Land Seeding) ಯಶಸ್ವಿಯಾಗಿರಬೇಕು. ಇವುಗಳಲ್ಲಿ ಯಾವುದೇ ಒಂದು ಪ್ರಕ್ರಿಯೆ ಬಾಕಿ ಇದ್ದರೂ 22ನೇ ಕಂತಿನ ಹಣ ನಿಮ್ಮ ಖಾತೆಗೆ ಬರುವುದಿಲ್ಲ!