Lunar Eclipse: ಅಪರೂಪದ ‘ಬ್ಲಡ್ ಮೂನ್’ ಚಂದ್ರಗ್ರಹಣ: ಭಾರತದಲ್ಲಿ ಗೋಚರಿಸುವ ಸಮಯ, ಸೂತಕದ ಕಟ್ಟುನಿಟ್ಟಿನ ನಿಯಮಗಳ ಸಂಪೂರ್ಣ ಮಾಹಿತಿ

Telegram Group Join Now
WhatsApp Group Join Now

ಇಂದು (ಮಾರ್ಚ್ 3, 2026, ಮಂಗಳವಾರ) ಬಾಹ್ಯಾಕಾಶದಲ್ಲಿ ಒಂದು ಅಪರೂಪದ ಖಗೋಳ ವಿಸ್ಮಯ ಜರುಗಲಿದೆ. ವಿಶೇಷವೆಂದರೆ, ಬಣ್ಣಗಳ ಹಬ್ಬವಾದ ‘ಹೋಳಿ ಹುಣ್ಣಿಮೆ’ಯ (ಫಾಲ್ಗುಣ ಮಾಸದ ಹುಣ್ಣಿಮೆ) ದಿನದಂದೇ ಈ ವರ್ಷದ ಮೊದಲ ‘ಖಗ್ರಾಸ ಚಂದ್ರಗ್ರಹಣ’ (Total Lunar Eclipse) ಸಂಭವಿಸುತ್ತಿರುವುದು ವಿಜ್ಞಾನ ಮತ್ತು ಜ್ಯೋತಿಷ್ಯ ಶಾಸ್ತ್ರ ಎರಡೂ ದೃಷ್ಟಿಯಿಂದ ತೀವ್ರ ಕುತೂಹಲ ಕೆರಳಿಸಿದೆ.

ಆಗಸದಲ್ಲಿ ಚಂದ್ರನು ಸಂಪೂರ್ಣವಾಗಿ ಕೆಂಪು ಬಣ್ಣಕ್ಕೆ ತಿರುಗಲಿದ್ದು, ಇದನ್ನು ‘ಬ್ಲಡ್ ಮೂನ್’ (Blood Moon) ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಹಾಗೂ ರಾಜ್ಯದಲ್ಲಿ ಗ್ರಹಣ ಗೋಚರಿಸುವ ಅಧಿಕೃತ ನಿಖರ ಸಮಯ, ಸೂತಕದ ಕಟ್ಟುನಿಟ್ಟಿನ ನಿಯಮಗಳು ಮತ್ತು ಮುಚ್ಚಲಿರುವ ಪ್ರಮುಖ ದೇವಸ್ಥಾನಗಳ ಮಾಹಿತಿ ಇಲ್ಲಿದೆ.

ಗ್ರಹಣದ ಅಧಿಕೃತ ಮತ್ತು ನಿಖರ ಸಮಯ:

ಖಗೋಳ ವಿಜ್ಞಾನದ ಪ್ರಕಾರ ಗ್ರಹಣವು ಮಧ್ಯಾಹ್ನವೇ ಶುರುವಾದರೂ, ಆ ಸಮಯದಲ್ಲಿ ನಮ್ಮಲ್ಲಿ ಚಂದ್ರೋದಯ ಆಗಿರುವುದಿಲ್ಲ. ಹೀಗಾಗಿ ಸಂಜೆ ಚಂದ್ರೋದಯದ ಬಳಿಕವಷ್ಟೇ ನಮಗೆ ಗ್ರಹಣದ ದರ್ಶನವಾಗಲಿದೆ.

  • ಗ್ರಹಣದ ಸ್ಪರ್ಶ ಕಾಲ (ಆರಂಭ): ಮಧ್ಯಾಹ್ನ 3:20 ಕ್ಕೆ.
  • ಪೂರ್ಣ ಚಂದ್ರಗ್ರಹಣ ಆರಂಭ: ಸಂಜೆ 4:34 ಕ್ಕೆ.
  • ಭಾರತದಲ್ಲಿ ಗೋಚರ (ಚಂದ್ರೋದಯ): ಸಂಜೆ 6:22 ರಿಂದ 6:34 ರ ಸುಮಾರಿಗೆ (ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ).
  • ಗ್ರಹಣ ಮುಕ್ತಾಯ (ಮೋಕ್ಷ ಕಾಲ): ಸಂಜೆ 6:47 ಕ್ಕೆ.

ಬೆಂಗಳೂರಿನಲ್ಲಿ ಹೇಗಿರಲಿದೆ?: ಬೆಂಗಳೂರು, ಮುಂಬೈ, ದೆಹಲಿಯಂತಹ ನಗರಗಳಲ್ಲಿ ಸಂಜೆ 6:30 ರ ಸುಮಾರಿಗೆ ಚಂದ್ರೋದಯ ಆಗುವುದರಿಂದ, ಇಲ್ಲಿನ ಜನರಿಗೆ ಗ್ರಹಣದ ಕೊನೆಯ ಹಂತವಾದ ಕೇವಲ 15 ರಿಂದ 20 ನಿಮಿಷಗಳ ಕಾಲ ‘ಬ್ಲಡ್ ಮೂನ್’ ಛಾಯೆ ಮಾತ್ರ ಬರಿಗಣ್ಣಿಗೆ ಗೋಚರಿಸಲಿದೆ.

ಬೆಳಿಗ್ಗೆಯಿಂದಲೇ ‘ಸೂತಕ ಕಾಲ’ ಆರಂಭ: ನಿಯಮಗಳೇನು?

ಗ್ರಹಣದ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆಯಿಂದಲೇ ‘ಸೂತಕ ಕಾಲ’ (Sutak Kaal) ಆರಂಭವಾಗಲಿದ್ದು, ಈ ಅವಧಿಯಲ್ಲಿ ದೇವಸ್ಥಾನಗಳ ಬಾಗಿಲು ಮುಚ್ಚಲ್ಪಡುತ್ತವೆ.

  • ಸೂತಕ ಆರಂಭ: ಬೆಳಿಗ್ಗೆ 9:39 ಗಂಟೆಗೆ.
  • ಸೂತಕ ಅಂತ್ಯ: ಸಂಜೆ 6:47 ಕ್ಕೆ ಗ್ರಹಣ ಮುಕ್ತಾಯದೊಂದಿಗೆ. (ಮಕ್ಕಳು, ವೃದ್ಧರು ಮತ್ತು ರೋಗಿಗಳಿಗೆ ವಿನಾಯಿತಿ ಇದ್ದು, ಇವರಿಗೆ ಮಧ್ಯಾಹ್ನ 3:28 ರಿಂದ ನಿಯಮಗಳು ಅನ್ವಯಿಸುತ್ತವೆ).

ಗ್ರಹಣದ ಅವಧಿಯಲ್ಲಿ ಏನು ಮಾಡಬಾರದು?:

ಶಾಸ್ತ್ರಗಳ ಪ್ರಕಾರ ಈ ಕೇಳಗಿನ ಕೆಲಸಗಳನ್ನು ಮಾಡುವುದಿಲ್ಲ.

  • ಶುಭ ಕಾರ್ಯ ನಿಷಿದ್ಧ: ಪೂಜೆ, ಹವನ, ಮದುವೆ, ಮುಂಡನ, ಗೃಹಪ್ರವೇಶದಂತಹ ಮಂಗಳ ಕಾರ್ಯಗಳನ್ನು ಮಾಡುವಂತಿಲ್ಲ. ದೇವರ ವಿಗ್ರಹ ಹಾಗೂ ತುಳಸಿ ಗಿಡವನ್ನು ಸ್ಪರ್ಶಿಸಬಾರದು.
  • ಆಹಾರ ಸೇವನೆ ಬೇಡ: ಗ್ರಹಣ ಕಾಲಕ್ಕೆ ಕನಿಷ್ಠ 6 ಗಂಟೆಗಳ ಮುಂಚೆಯೇ ಆಹಾರ ಸೇವಿಸಬೇಕು. ಗ್ರಹಣದ ಸಮಯದಲ್ಲಿ (ಮಧ್ಯಾಹ್ನ 3:20 ರಿಂದ ಸಂಜೆ 6:47 ರವರೆಗೆ) ಹೊಸದಾಗಿ ಅಡುಗೆ ಮಾಡುವುದು, ಊಟ ಮಾಡುವುದು ಮತ್ತು ನಿದ್ದೆ ಮಾಡುವುದು ನಿಷಿದ್ಧ.
  • ಗರ್ಭಿಣಿಯರಿಗೆ ಎಚ್ಚರಿಕೆ: ಸೂತಕ ಆರಂಭವಾದ ಮೇಲೆ ಗರ್ಭಿಣಿಯರು ಮನೆಯಿಂದ ಹೊರಬರಬಾರದು. ಗ್ರಹಣದ ಋಣಾತ್ಮಕ ಕಿರಣಗಳು ಗರ್ಭಸ್ಥ ಶಿಶುವಿನ ಮೇಲೆ ಪ್ರಭಾವ ಬೀರಬಹುದು ಎನ್ನಲಾಗುತ್ತದೆ.

ಪರಿಹಾರ ಮತ್ತು ಆಚರಣೆಗಳು:

  • ಗ್ರಹಣ ಆರಂಭಕ್ಕೂ ಮುನ್ನವೇ ಮನೆಯಲ್ಲಿರುವ ಹಾಲು, ಮೊಸರು, ತುಪ್ಪ, ಉಪ್ಪಿನಕಾಯಿ ಮತ್ತು ಕುಡಿಯುವ ನೀರಿನ ಪಾತ್ರೆಗಳಿಗೆ ‘ದರ್ಬೆ’ ಅಥವಾ ‘ತುಳಸಿ ಎಲೆ’ ಹಾಕಿಡಬೇಕು. (ಬೇಯಿಸಿದ ಆಹಾರಕ್ಕೆ ದರ್ಬೆ ಅನ್ವಯಿಸುವುದಿಲ್ಲ).
  • ಸಿಂಹ ರಾಶಿ, ಪುಬ್ಬಾ ನಕ್ಷತ್ರದಲ್ಲಿ ಈ ಕೇತುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತಿರುವುದರಿಂದ ಮಘಾ, ಪುಬ್ಬ, ಉತ್ತರ, ಭರಣಿ, ಪೂರ್ವಾಷಾಢ ನಕ್ಷತ್ರದವರಿಗೆ ಹಾಗೂ ಸಿಂಹ, ಕನ್ಯಾ, ಮಕರ, ವೃಷಭ ರಾಶಿಯವರಿಗೆ ಇದು ಕೊಂಚ ಅನಿಷ್ಟಕಾರಿಯಾಗಿದೆ.
  • ದೋಷ ಪರಿಹಾರ: ಗ್ರಹಣ ಮುಗಿದ ಬಳಿಕ (ಸಂಜೆ 6:47ರ ನಂತರ) ಸ್ನಾನ ಮಾಡಿ, ಅಕ್ಕಿ, ಹುರುಳಿ, ಬೆಳ್ಳಿ ಹಾಗೂ ವಸ್ತ್ರದಾನ ಮಾಡುವುದರಿಂದ ಅನಿಷ್ಟಗಳು ದೂರವಾಗಿ ಶುಭಫಲ ಪ್ರಾಪ್ತಿಯಾಗುತ್ತದೆ.

ರಾಜ್ಯದ ಪ್ರಮುಖ ದೇವಾಲಯಗಳ ದರ್ಶನ ಸಮಯದಲ್ಲಿ ಬದಲಾವಣೆ:

ಗ್ರಹಣದ ಹಿನ್ನೆಲೆಯಲ್ಲಿ ನಾಳೆ ರಾಜ್ಯದ ಪ್ರಸಿದ್ಧ ದೇವಾಲಯಗಳ ದರ್ಶನ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಲಿದೆ:

  1. ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯ: ಮಧ್ಯಾಹ್ನ 3:00 ರಿಂದ ಸಂಜೆ 7:00 ಗಂಟೆವರೆಗೆ ದೇವಿಯ ದರ್ಶನ ಇರುವುದಿಲ್ಲ. ಮಧ್ಯಾಹ್ನದ ಭೋಜನ ಕೇವಲ 12 ಗಂಟೆವರೆಗೆ ಮಾತ್ರ ಇರಲಿದ್ದು, ರಾತ್ರಿ 8 ಗಂಟೆ ಬಳಿಕ ಎಂದಿನಂತೆ ಭೋಜನ ವ್ಯವಸ್ಥೆ ಇರಲಿದೆ.
  2. ಉಡುಪಿ ಶ್ರೀಕೃಷ್ಣ ಮಠ: ನಾಳೆ ಕೃಷ್ಣ ಮಠದಲ್ಲಿ ಏಕಾದಶಿಯ ರೀತಿಯಲ್ಲಿ ಉಪವಾಸ ಆಚರಿಸಲಾಗುತ್ತದೆ. ರಾತ್ರಿಯ ಪೂಜೆಯು ಸಂಜೆ 7 ಗಂಟೆಯ (ಗ್ರಹಣ ಬಿಟ್ಟ) ಬಳಿಕ ನಡೆಯಲಿದೆ.
  3. ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯ: ಬೆಳಿಗ್ಗೆ 6:30 ರಿಂದ ಮಧ್ಯಾಹ್ನ 1:30 ರವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿರುತ್ತದೆ. ಮಧ್ಯಾಹ್ನ 1:30ಕ್ಕೆ ದೇಗುಲ ಮುಚ್ಚಲಿದ್ದು, ಗ್ರಹಣದ ಅವಧಿ ಮುಗಿದ ನಂತರ ರಾತ್ರಿ 7:30ಕ್ಕೆ ಪುನಃ ಬಾಗಿಲು ತೆರೆಯಲಾಗುವುದು.
  4. ದೊಡ್ಡ ಗಣೇಶ ದೇವಾಲಯ (ಬೆಂಗಳೂರು): ಬಸವನಗುಡಿಯ ಪ್ರಸಿದ್ಧ ದೊಡ್ಡ ಗಣೇಶನ ದರ್ಶನ ಮಧ್ಯಾಹ್ನದ ನಂತರ ಸ್ಥಗಿತಗೊಳ್ಳಲಿದ್ದು, ಗ್ರಹಣ ಮುಕ್ತಾಯವಾದ ಬಳಿಕ ರಾತ್ರಿ 7:45ಕ್ಕೆ ಭಕ್ತರಿಗಾಗಿ ಬಾಗಿಲು ತೆರೆಯಲಾಗುವುದು.

“ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಆಗ ಭೂಮಿಯ ವಾತಾವರಣವು ಬೆಳಕನ್ನು ಚದುರಿಸಿ ಕೇವಲ ಕೆಂಪು ಕಿರಣಗಳನ್ನು ವಕ್ರೀಭವಿಸುವುದರಿಂದ ಚಂದ್ರ ತಾಮ್ರ ಅಥವಾ ಗಾಢ ಕೆಂಪು ಬಣ್ಣದಲ್ಲಿ ಕಾಣುತ್ತಾನೆ. ಇದನ್ನು ವಿಜ್ಞಾನದಲ್ಲಿ ‘ರೈಲಿ ಸ್ಕ್ಯಾಟರಿಂಗ್’ (Rayleigh scattering) ಎನ್ನಲಾಗುತ್ತದೆ. ಇದೊಂದು ಸಂಪೂರ್ಣ ನೈಸರ್ಗಿಕ ಪ್ರಕ್ರಿಯೆಯಾಗಿದ್ದು, ಬರಿಗಣ್ಣಿನಿಂದಲೇ ಸುರಕ್ಷಿತವಾಗಿ ವೀಕ್ಷಿಸಬಹುದು.”

ಇದನ್ನೂ ಓದಿ: FRUITS e-KYC Karnataka: ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲೇ ಫ್ರೂಟ್ಸ್ ‘e-KYC’ ಮಾಡಿ

Telegram Group Join Now
WhatsApp Group Join Now

Leave a Comment