ಕರುನಾಡಿನ ಕ್ರಿಕೆಟ್ ಅಭಿಮಾನಿಗಳಿಗೆ, ಅದರಲ್ಲೂ ಆರ್‌ಸಿಬಿ (RCB) ಫ್ಯಾನ್ಸ್ಗೆ ಭರ್ಜರಿ ಸಿಹಿಸುದ್ದಿ. ಹಾಲಿ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೀಗ ಮತ್ತೆ ತನ್ನ ತವರು ಕೋಟೆ, ಐತಿಹಾಸಿಕ ‘ಎಂ. ಚಿನ್ನಸ್ವಾಮಿ ಕ್ರೀಡಾಂಗಣ’ಕ್ಕೆ ಮರಳಲು ಸಜ್ಜಾಗಿದೆ. ಸರ್ಕಾರದ ಜೊತೆಗಿನ ಹಲವು ಸುತ್ತಿನ ಮಾತುಕತೆಗಳ ಬಳಿಕ ಕೊನೆಗೂ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಮುಂಬರುವ IPL 2026 ರ ಟೂರ್ನಿಯು ಸಂಪೂರ್ಣವಾಗಿ ‘ಬೆಂಗಳೂರು ಕೇಂದ್ರಿತ’ವಾಗುವ ನಿರೀಕ್ಷೆಯಿದೆ.
ಅಧಿಕೃತ ಘೋಷಣೆ: ಇನ್ಸ್ಟಾಗ್ರಾಮ್‌ನಲ್ಲಿ ಗುಡ್ ನ್ಯೂಸ್ ಕೊಟ್ಟ RCB ಆರ್‌ಸಿಬಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಈ ಸಿಹಿಸುದ್ದಿಯನ್ನು ಖಚಿತಪಡಿಸಿದೆ. “ನಮಸ್ಕಾರ ಬೆಂಗಳೂರು! ಚಾಂಪಿಯನ್ಸ್ ಆರ್ ಕಮಿಂಗ್ ಹೋಮ್” (Champions are coming home) ಎಂದು ಬರೆದುಕೊಂಡಿರುವ ಫ್ರಾಂಚೈಸಿಯು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 5 ತವರು ಪಂದ್ಯಗಳನ್ನು ಹಾಗೂ ಛತ್ತೀಸ್‌ಗಢದ ರಾಯ್ಪುರದಲ್ಲಿ 2 ಪಂದ್ಯಗಳನ್ನು ಆಡುವುದಾಗಿ ಸ್ಪಷ್ಟಪಡಿಸಿದೆ. “ಬೆಂಗಳೂರು ಸಿದ್ಧರಾಗಿ, ಚಾಂಪಿಯನ್‌ಗಳು ನಿಮಗೆ ಮನರಂಜನೆ ನೀಡಲು ಹಿಂದಿರುಗುತ್ತಿದ್ದಾರೆ” ಎಂದು ಅಭಿಮಾನಿಗಳಲ್ಲಿ ಉತ್ಸಾಹ ತುಂಬಿದೆ.
IPL 2026 ಉದ್ಘಾಟನಾ ಪಂದ್ಯ ಹಾಗೂ ಫೈನಲ್ ಕೂಡ ಬೆಂಗಳೂರಿನಲ್ಲೇ!:
ವರದಿಗಳ ಪ್ರಕಾರ, IPL 2026 ರ ಉದ್ಘಾಟನಾ ಪಂದ್ಯವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಲಿದ್ದು, ಬೃಹತ್ ಉದ್ಘಾಟನಾ ಸಮಾರಂಭಕ್ಕೂ ನಗರ ಸಾಕ್ಷಿಯಾಗಲಿದೆ. ವಾಡಿಕೆಯಂತೆ ಚಾಂಪಿಯನ್ ಹಾಗೂ ರನ್ನರ್ ಅಪ್ (ಪಂಜಾಬ್ ಕಿಂಗ್ಸ್) ನಡುವೆ ಪಂದ್ಯ ನಡೆಯಬೇಕಿತ್ತಾದರೂ, ಈ ಬಾರಿ ಆರ್‌ಸಿಬಿ ಹಾಗೂ ಕೆಕೆಆರ್ (KKR) ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಸೆಣಸಾಡಲಿವೆ ಎಂದು ತಿಳಿದುಬಂದಿದೆ. ಇಷ್ಟು ಮಾತ್ರವಲ್ಲದೆ, ಲೀಗ್ ಪಂದ್ಯಗಳ ಜೊತೆಗೆ ಟೂರ್ನಿಯ ಹೈ-ವೋಲ್ಟೇಜ್ ಪ್ಲೇ-ಆಫ್ (Playoffs) ಹಾಗೂ ಮಹತ್ವದ ‘ಫೈನಲ್’ ಪಂದ್ಯ ಕೂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಲಿದೆ.
ನಿಷೇಧವೇಕೆ ಇತ್ತು? ತವರಿಗೆ ಕ್ರಿಕೆಟ್ ಮರಳಿದ್ದು ಹೇಗೆ? IPL 2025 ರ ಟ್ರೋಫಿ ಗೆದ್ದ ಬಳಿಕ ಜೂನ್ 4 ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ವಿಜಯೋತ್ಸವದ ವೇಳೆ ಭಾರಿ ಜನದಟ್ಟಣೆಯಿಂದಾಗಿ ಕಾಲ್ತುಳಿತ ಉಂಟಾಗಿತ್ತು. ಈ ದುರಂತದಲ್ಲಿ 11 ಮಂದಿ ಮೃತಪಟ್ಟು, 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಈ ಕರಾಳ ಘಟನೆಯ ಬಳಿಕ, ಭದ್ರತಾ ದೃಷ್ಟಿಯಿಂದ ರಾಜ್ಯ ಸರ್ಕಾರವು ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆಗೆ ಅನುಮತಿ ನಿರಾಕರಿಸಿತ್ತು.
ಆದರೆ, ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಯ ನೂತನ ಅಧ್ಯಕ್ಷರಾಗಿ ಟೀಮ್ ಇಂಡಿಯಾದ ಮಾಜಿ ವೇಗಿ ಬಿ.ಕೆ. ವೆಂಕಟೇಶ್ ಪ್ರಸಾದ್ ಆಯ್ಕೆಯಾದ ಬಳಿಕ, ಪರಿಸ್ಥಿತಿ ಬದಲಾಗಿದೆ. ಕೆಎಸ್‌ಸಿಎ, ಆರ್‌ಸಿಬಿ ಫ್ರಾಂಚೈಸಿ ಹಾಗೂ ರಾಜ್ಯ ಸರ್ಕಾರದ ನಡುವೆ ನಡೆದ ಸುದೀರ್ಘ ಚರ್ಚೆಗಳ ನಂತರ, ಸರ್ಕಾರದ ಎಲ್ಲಾ ಭದ್ರತಾ ಷರತ್ತುಗಳನ್ನು ಪೂರೈಸುವ ಭರವಸೆಯ ಮೇರೆಗೆ ಇದೀಗ ಪಂದ್ಯಗಳ ಆಯೋಜನೆಗೆ ಅನುಮತಿ ಪಡೆಯಲಾಗಿದೆ.
“ಅಭಿಮಾನಿಗಳೇ ನಮ್ಮ ಶಕ್ತಿ” – ಸಿಇಒ ರಾಜೇಶ್ ಮೆನನ್ ಧನ್ಯವಾದ ತವರಿನಲ್ಲಿ ಪಂದ್ಯಗಳನ್ನು ಆಡುವ ಕುರಿತು ಪ್ರತಿಕ್ರಿಯಿಸಿರುವ ಆರ್‌ಸಿಬಿ ಸಿಇಒ ರಾಜೇಶ್ ಮೆನನ್, “ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ನಮ್ಮ ಪಾಲಿಗೆ ಕೇವಲ ತವರು ಮೈದಾನವಷ್ಟೇ ಅಲ್ಲ, ಅದಕ್ಕೂ ಮಿಗಿಲಾದದ್ದು. ನಮ್ಮ ಅಭಿಮಾನಿಗಳು ನೀಡುವ ಬೆಂಬಲವೇ ಆಟಗಾರರಿಗೆ ಸದಾ ಪ್ರೇರಕ ಶಕ್ತಿ. ಕಷ್ಟಕಾಲದಲ್ಲೂ ಬೇಷರತ್ತಾಗಿ ಬೆಂಬಲಿಸಿದ ಫ್ಯಾನ್ಸ್, ತಮ್ಮ ತಂಡವನ್ನು ತವರಿನಲ್ಲಿಯೇ ನೋಡುವ ಅವಕಾಶಕ್ಕೆ ಅರ್ಹರಾಗಿದ್ದಾರೆ,” ಎಂದಿದ್ದಾರೆ. ಅಲ್ಲದೆ, ಪಂದ್ಯಗಳ ಆಯೋಜನೆಗೆ ಸಹಕರಿಸಿದ ಕರ್ನಾಟಕ ಸರ್ಕಾರ, ಕೆಎಸ್‌ಸಿಎ ಮತ್ತು ರಾಜ್ಯ ಪೊಲೀಸ್ ಇಲಾಖೆಗೆ ಆರ್‌ಸಿಬಿ ಪರವಾಗಿ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ.
ಕಳೆದ ವರ್ಷದ ಕರಾಳ ದುರಂತದ ನಂತರ, ಬೆಂಗಳೂರಿಗೆ ಕ್ರಿಕೆಟ್ ಮರಳಿರುವುದು ಅಭಿಮಾನಿಗಳಿಗೆ ದೊಡ್ಡ ರಿಲೀಫ್ ನೀಡಿದೆ. ಲೀಗ್ ಪಂದ್ಯಗಳು, ಪ್ಲೇ-ಆಫ್ ಹಾಗೂ ಫೈನಲ್ಸ್ – ಹೀಗೆ ಇಡೀ ಟೂರ್ನಿಯೇ ಬೆಂಗಳೂರಿನ ಸುತ್ತ ಗಿರಕಿ ಹೊಡೆಯಲಿದ್ದು, ಈ ಬಾರಿಯ ಐಪಿಎಲ್ ಹಬ್ಬವು ಸಿಲಿಕಾನ್ ಸಿಟಿಯಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಖಚಿತ!
ಇದನ್ನೂ ಓದಿ: ಗುಡ್ ನ್ಯೂಸ್: 56 ಸಾವಿರ ಹುದ್ದೆಗಳ ನೇಮಕಾತಿಗಾಗಿ ಸರ್ಕಾರದಿಂದ ಅಧಿಕೃತ ಆದೇಶ