ಬಿರ್ಲಾ ತೆಕ್ಕೆಗೆ ಆರ್‌ಸಿಬಿ: ಹೊಸ ಇತಿಹಾಸ ಸೃಷ್ಟಿಸಿ ಬರೋಬ್ಬರಿ ₹16,706 ಕೋಟಿಗೆ RCB ಮಾರಾಟ

Telegram Group Join Now
WhatsApp Group Join Now

ಕಳೆದ 2025ರ ಐಪಿಎಲ್ ಸೀಸನ್‌ನಲ್ಲಿ ಚೊಚ್ಚಲ ಬಾರಿಗೆ ಕಪ್ ಗೆದ್ದು ಬೀಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇದೀಗ ಆರ್ಥಿಕ ಮೌಲ್ಯದಲ್ಲೂ ಹೊಸ ಇತಿಹಾಸ ಸೃಷ್ಟಿಸಿದೆ. ಐಪಿಎಲ್ (IPL) ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತಕ್ಕೆ ಆರ್‌ಸಿಬಿ ಫ್ರಾಂಚೈಸಿ ಮಾರಾಟವಾಗಿದ್ದು, ಲೀಗ್‌ನ ಅತ್ಯಂತ ಶ್ರೀಮಂತ ಹಾಗೂ ದುಬಾರಿ ತಂಡವಾಗಿ ಹೊರಹೊಮ್ಮಿದೆ.

ಹಾಗಾದರೆ ಆರ್‌ಸಿಬಿಯನ್ನು ಖರೀದಿಸಿದವರು ಯಾರು? ಈ ಬೃಹತ್ ಡೀಲ್‌ನ ಮೊತ್ತವೆಷ್ಟು? ಐಪಿಎಲ್‌ನ ಟಾಪ್-5 ಶ್ರೀಮಂತ ತಂಡಗಳು ಯಾವುವು? ಸಂಪೂರ್ಣ ಮಾಹಿತಿ ಇಲ್ಲಿದೆ:

ಆರ್‌ಸಿಬಿಯ ಹೊಸ ಮಾಲೀಕರು ಯಾರು?: ಭಾರತದ ಪ್ರಸಿದ್ಧ ಬಹುರಾಷ್ಟ್ರೀಯ ಸಂಸ್ಥೆಯಾದ ಬಿಲಿಯನೇರ್ ಕುಮಾರ್ ಮಂಗಲಂ ಬಿರ್ಲಾ ಒಡೆತನದ ‘ಆದಿತ್ಯ ಬಿರ್ಲಾ ಗ್ರೂಪ್’ ನೇತೃತ್ವದ ಒಕ್ಕೂಟವು ಆರ್‌ಸಿಬಿ ತಂಡದ ಒಡೆತನವನ್ನು ಖರೀದಿಸಿದೆ. ಈ ಬೃಹತ್ ಒಕ್ಕೂಟದಲ್ಲಿ ಅಮೆರಿಕದ ಖಾಸಗಿ ಇಕ್ವಿಟಿ ಸಂಸ್ಥೆಯಾದ ಬ್ಲಾಕ್‌ಸ್ಟೋನ್ (Blackstone), ಅಮೆರಿಕದ ಕ್ರೀಡಾ ಹೂಡಿಕೆದಾರ ಡೇವಿಡ್ ಬ್ಲಿಟ್ಜರ್ ಹಾಗೂ ಟೈಮ್ಸ್ ಆಫ್ ಇಂಡಿಯಾ (Times Group) ಸಂಸ್ಥೆಗಳು ಕೂಡ ಪಾಲುದಾರರಾಗಿವೆ.

ಎಷ್ಟು ಕೋಟಿಗೆ ಮಾರಾಟವಾಯ್ತು?: ಈ ದಾಖಲೆಯ ಒಪ್ಪಂದದಲ್ಲಿ ಆರ್‌ಸಿಬಿ ಫ್ರಾಂಚೈಸಿಯು $1.78 ಬಿಲಿಯನ್, ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಭಾರಿ ಎನಿಸುವ ₹16,706 ಕೋಟಿಗೆ ಮಾರಾಟವಾಗಿದೆ. ಇದು ಒಟ್ಟಾರೆ ಕ್ರಿಕೆಟ್ ಇತಿಹಾಸದಲ್ಲೇ ಇದುವರೆಗಿನ ಅತಿದೊಡ್ಡ ಮಾರಾಟವಾಗಿದೆ.

ಹೊಸ ಆಡಳಿತ ಮಂಡಳಿ: ಹೊಸ ಮಾಲೀಕತ್ವದ ಒಪ್ಪಂದದ ಬಳಿಕ ಆರ್‌ಸಿಬಿ ಆಡಳಿತ ಮಂಡಳಿಯೂ ಬದಲಾಗಿದೆ:

  • ಅಧ್ಯಕ್ಷರು: ಆದಿತ್ಯ ಬಿರ್ಲಾ ಗ್ರೂಪ್‌ನ ನಿರ್ದೇಶಕ ಆರ್ಯಮಾನ್ ವಿಕ್ರಮ್ ಬಿರ್ಲಾ ಅವರು ಆರ್‌ಸಿಬಿಯ ನೂತನ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಲಿದ್ದಾರೆ.
  • ಉಪಾಧ್ಯಕ್ಷರು: ಟೈಮ್ಸ್ ಇಂಟರ್ನೆಟ್‌ನ ಸತ್ಯನ್ ಗಜ್ವಾನಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
  • ಇದರ ಜೊತೆಗೆ ಬೋಲ್ಟ್ ವೆಂಚರ್ಸ್‌ನ ಸಂಸ್ಥಾಪಕ ಡೇವಿಡ್ ಬ್ಲಿಟ್ಜರ್ ಮತ್ತು ಬ್ಲಾಕ್‌ಸ್ಟೋನ್ ಸಿಇಒ ವಿರಾಲ್ ಪಟೇಲ್ ಕೂಡ ಆಡಳಿತ ಮಂಡಳಿಯಲ್ಲಿದ್ದಾರೆ.

ಅಭಿಮಾನಿಗಳಿಗೆ ಭರವಸೆ ನೀಡಿದ ಹೊಸ ಮಾಲೀಕರು: ಈ ಐತಿಹಾಸಿಕ ಒಪ್ಪಂದದ ಬಗ್ಗೆ ಪ್ರತಿಕ್ರಿಯಿಸಿರುವ ಆದಿತ್ಯ ಬಿರ್ಲಾ ಗ್ರೂಪ್ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ, “ಐಪಿಎಲ್ ಭಾರತೀಯ ಕ್ರಿಕೆಟ್‌ನ ಚಿತ್ರಣವನ್ನೇ ಬದಲಾಯಿಸಿದೆ. ಅತ್ಯಂತ ಬಲಿಷ್ಠ ಫ್ರಾಂಚೈಸಿಗಳಲ್ಲಿ ಒಂದಾದ ಆರ್‌ಸಿಬಿಯ ಪಾಲಕರಾಗಲು ನಮಗೆ ಅತೀವ ಸಂತೋಷವಿದೆ” ಎಂದಿದ್ದಾರೆ. ಇನ್ನು ನೂತನ ಉಪಾಧ್ಯಕ್ಷ ಸತ್ಯನ್ ಗಜ್ವಾನಿ ಮಾತನಾಡಿ, “ಕರ್ನಾಟಕದ ಅದ್ಭುತ ಅಭಿಮಾನಿ ಬಳಗ ಹೊಂದಿರುವ ಆರ್‌ಸಿಬಿಯನ್ನು ಜಾಗತಿಕ ಕ್ರೀಡಾ ಸಂಸ್ಥೆಯಾಗಿ ಬೆಳೆಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.

ರಾಜಸ್ಥಾನ್ ರಾಯಲ್ಸ್ ದಾಖಲೆ ಉಡೀಸ್: ಆರ್‌ಸಿಬಿ ಮಾರಾಟವಾಗುವ ಕೇವಲ ಕೆಲವೇ ಗಂಟೆಗಳ ಮೊದಲು ರಾಜಸ್ಥಾನ ರಾಯಲ್ಸ್ (RR) ತಂಡ ಕೂಡ ಬೃಹತ್ ಮೊತ್ತಕ್ಕೆ ಮಾರಾಟವಾಗಿತ್ತು. ಕಲ್ ಸೋಮಾನಿ ಮತ್ತು ರಾಬ್ ವಾಲ್ಟನ್ ನೇತೃತ್ವದ ಒಕ್ಕೂಟವು ರಾಜಸ್ಥಾನ ರಾಯಲ್ಸ್ ತಂಡವನ್ನು $1.63 ಬಿಲಿಯನ್ (₹15,300 ಕೋಟಿ) ಕೊಟ್ಟು ಖರೀದಿಸಿತ್ತು. ಆ ಮೂಲಕ ಐಪಿಎಲ್‌ನಲ್ಲಿ 1 ಬಿಲಿಯನ್ ಡಾಲರ್ ಗಡಿ ದಾಟಿದ ಮೊದಲ ತಂಡ ಎಂಬ ಖ್ಯಾತಿಗೆ ರಾಜಸ್ಥಾನ ಪಾತ್ರವಾಗಿತ್ತು.

ಆದರೆ, ಕೆಲವೇ ಗಂಟೆಗಳಲ್ಲಿ ₹16,706 ಕೋಟಿಗೆ ಸೇಲ್ ಆಗುವ ಮೂಲಕ ಆರ್‌ಸಿಬಿ ಆ ದಾಖಲೆಯನ್ನು ಹಿಂದಿಕ್ಕಿ ನಂಬರ್ 1 ಸ್ಥಾನಕ್ಕೇರಿದೆ. ಇದಕ್ಕೂ ಮುನ್ನ 2022ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ₹7,050 ಕೋಟಿಗೆ ($940 ಮಿಲಿಯನ್) ಮಾರಾಟವಾಗಿದ್ದೇ ದೊಡ್ಡ ದಾಖಲೆಯಾಗಿತ್ತು.

2026ರ ಟಾಪ್ 5 ಅತ್ಯಂತ ಮೌಲ್ಯಯುತ ಐಪಿಎಲ್ ತಂಡಗಳು: ಇತ್ತೀಚಿನ ಈ ಮೆಗಾ ಮಾರಾಟಗಳ ನಂತರ ಲೀಗ್‌ನ ಒಟ್ಟಾರೆ ಮೌಲ್ಯ $18.5 ಬಿಲಿಯನ್‌ಗೆ ತಲುಪಿದ್ದು, ಟಾಪ್ 5 ಶ್ರೀಮಂತ ತಂಡಗಳ ಪಟ್ಟಿ ಹೀಗಿದೆ:

  • ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB): ₹16,706 ಕೋಟಿ (ಆದಿತ್ಯ ಬಿರ್ಲಾ ಗ್ರೂಪ್ ಒಕ್ಕೂಟ)
  • ರಾಜಸ್ಥಾನ ರಾಯಲ್ಸ್ (RR): ₹15,300 ಕೋಟಿ (ಕಲ್ ಸೋಮಾನಿ ಒಕ್ಕೂಟ)
  • ಮುಂಬೈ ಇಂಡಿಯನ್ಸ್ (MI): $242 ಮಿಲಿಯನ್ ಅಂದಾಜು (ರಿಲಯನ್ಸ್ ಇಂಡಸ್ಟ್ರೀಸ್)
  • ಚೆನ್ನೈ ಸೂಪರ್ ಕಿಂಗ್ಸ್ (CSK): $235 ಮಿಲಿಯನ್ ಅಂದಾಜು (ಇಂಡಿಯಾ ಸಿಮೆಂಟ್ಸ್)
  • ಕೋಲ್ಕತ್ತಾ ನೈಟ್ ರೈಡರ್ಸ್ (KKR): $222 ಮಿಲಿಯನ್ ಅಂದಾಜು (ರೆಡ್ ಚಿಲ್ಲೀಸ್ ಮತ್ತು ಮೆಹ್ತಾ ಗ್ರೂಪ್)

ಒಂದು ಕುತೂಹಲಕಾರಿ ಸಂಗತಿ: ಇದೀಗ ಆರ್‌ಸಿಬಿಯ ಹೊಸ ಮಾಲೀಕರಲ್ಲಿ ಒಬ್ಬರಾಗಿರುವ ಆರ್ಯಮಾನ್ ಬಿರ್ಲಾ ಅವರು ಹಿಂದೆ ಇದೇ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ಐಪಿಎಲ್ ಆಡಿದ್ದರು ಎಂಬುದು ವಿಶೇಷ.

Telegram Group Join Now
WhatsApp Group Join Now

Leave a Comment