2026ನೇ ಸಾಲಿನ ಸಾರ್ವತ್ರಿಕ ರಜಾ ಪಟ್ಟಿಯಲ್ಲಿ ರಾಜ್ಯ ಸರ್ಕಾರವು ಮಹತ್ವದ ಬದಲಾವಣೆಯೊಂದನ್ನು ಮಾಡಿದೆ. ಈ ಮೊದಲು ಮಂಗಳವಾರ (ಮಾರ್ಚ್ 31) ನಿಗದಿಯಾಗಿದ್ದ ‘ಮಹಾವೀರ ಜಯಂತಿ’ಯ ಸಾರ್ವತ್ರಿಕ ರಜೆಯನ್ನು ಇದೀಗ ಸೋಮವಾರಕ್ಕೆ (ಮಾರ್ಚ್ 30) ಮುಂಗಡವಾಗಿ ವರ್ಗಾಯಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ರಜಾ ದಿನಾಂಕದ ಈ ದಿಢೀರ್ ಬದಲಾವಣೆಯ ಹಿಂದಿನ ಸಂಪೂರ್ಣ ಮಾಹಿತಿ ಮತ್ತು ಇದರಿಂದಾಗುವ ಲಾಭದ ಡೀಟೇಲ್ಸ್ ಇಲ್ಲಿದೆ:
ಏನಿದು ಹೊಸ ಆದೇಶ?: ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಗುರುವಾರ (ಮಾರ್ಚ್ 26, 2026) ಈ ಬಗ್ಗೆ ಪರಿಷ್ಕೃತ ಅಧಿಸೂಚನೆ ಹೊರಡಿಸಿದೆ. 2025ರ ನವೆಂಬರ್ 17 ರಂದು ಪ್ರಕಟಿಸಲಾಗಿದ್ದ ಮೂಲ ರಜಾ ಪಟ್ಟಿಯಲ್ಲಿ (ಕ್ರಮ ಸಂಖ್ಯೆ 5ರ ಅಡಿ), ಮಹಾವೀರ ಜಯಂತಿಯನ್ನು ಮಾರ್ಚ್ 31ನೇ ತಾರೀಖು, ಮಂಗಳವಾರ ಎಂದು ಘೋಷಿಸಲಾಗಿತ್ತು. ಆದರೆ, ಇದೀಗ ಆ ರಜೆಯನ್ನು ಒಂದು ದಿನ ಮುಂಚಿತವಾಗಿ, ಅಂದರೆ ಮಾರ್ಚ್ 30ರ ಸೋಮವಾರಕ್ಕೆ ನಿಗದಿಪಡಿಸಲಾಗಿದೆ.
ರಜೆ ಬದಲಾವಣೆಗೆ ಅಸಲಿ ಕಾರಣವೇನು?:
ಕ್ಯಾಲೆಂಡರ್ ಪ್ರಕಾರ ಈ ಮೊದಲು ಮಾರ್ಚ್ 31 ರಂದು ಮಹಾವೀರ ಜಯಂತಿ ರಜೆ ನಿಗದಿಯಾಗಿತ್ತು. ಆದರೆ, ಜೈನ ಸಂಪ್ರದಾಯ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಆಚರಣೆಗೆ ಸೂರ್ಯೋದಯ ಕಾಲದ ತಿಥಿಯನ್ನು ಪ್ರಧಾನವಾಗಿ ಪರಿಗಣಿಸಲಾಗುತ್ತದೆ.
ಅದರಂತೆ ‘ಚೈತ್ರ ಶುಕ್ಲ ತ್ರಯೋದಶಿ’ ತಿಥಿಯು ಮಾರ್ಚ್ 30ರ ಬೆಳಿಗ್ಗೆಯೇ ಪ್ರಾರಂಭವಾಗುತ್ತದೆ. ಹೀಗಾಗಿ ಅಂದೇ ಜಯಂತಿ ಆಚರಿಸುವುದು ಸೂಕ್ತ ಎಂದು ಜೈನ ಸಮುದಾಯದ ಮುಖಂಡರು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (DPAR) ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಸರ್ಕಾರವು ಈ ಅಧಿಕೃತ ಬದಲಾವಣೆ ಮಾಡಿದೆ.
ವಾರಾಂತ್ಯದಲ್ಲಿ ಸತತ ರಜೆ (Long Weekend): ಸರ್ಕಾರದ ಈ ಬದಲಾವಣೆಯಿಂದ ಸರ್ಕಾರಿ ನೌಕರರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಲಾಭವಾಗಿದೆ. ಭಾನುವಾರ (ಮಾರ್ಚ್ 29) ವಾರಾಂತ್ಯದ ರಜೆ ಇರಲಿದ್ದು, ಅದರ ಬೆನ್ನಲ್ಲೇ ಈಗ ಸೋಮವಾರವೂ (ಮಾರ್ಚ್ 30) ಸಾರ್ವತ್ರಿಕ ರಜೆ ಸಿಗಲಿದೆ. ಇದರಿಂದ ಸತತ ಎರಡು ದಿನಗಳ ರಜೆಯ ಮಜಾ ಸಿಗಲಿದ್ದು, ಶನಿವಾರ ರಜೆ ಇರುವ ಕಚೇರಿಗಳ ಸಿಬ್ಬಂದಿಗೆ ಬರೋಬ್ಬರಿ 3 ದಿನಗಳ ಲಾಂಗ್ ವೀಕೆಂಡ್ (Long weekend) ಸಿಗಲಿದೆ.
ರಜೆ ಸೋಮವಾರಕ್ಕೆ ಬದಲಾಗಿರುವುದರಿಂದ, ಮಾರ್ಚ್ 31ರ ಮಂಗಳವಾರ ಎಂದಿನಂತೆ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಕಾರ್ಯನಿರ್ವಹಿಸಲಿವೆ.
ಬ್ಯಾಂಕ್‌ಗಳಿಗೂ ಅನ್ವಯ: ಈ ರಜೆಯನ್ನು 1881ರ ನೆಗೋಷಿಯಬಲ್ ಇನ್ಸ್ಟ್ರುಮೆಂಟ್ ಆಕ್ಟ್ (Negotiable Instruments Act, 1881) ಅಡಿಯಲ್ಲಿಯೂ ಘೋಷಿಸಿರುವುದರಿಂದ, ರಾಜ್ಯದ ಎಲ್ಲಾ ಬ್ಯಾಂಕ್‌ಗಳಿಗೂ ಸೋಮವಾರ ರಜೆ ಇರಲಿದೆ. ಹೀಗಾಗಿ ಬ್ಯಾಂಕ್ ಕೆಲಸಗಳಿದ್ದರೆ ಮಂಗಳವಾರದವರೆಗೆ ಕಾಯಬೇಕಾಗುತ್ತದೆ.